ರಾಜ್ಯದ ಜನತೆ ತಲೆತಗ್ಗಿಸುವ ಘಟನೆ ಸಿಎಂ ತವರು ಜಿಲ್ಲೆ ಮೈಸೂರಿನಲ್ಲಿ ನಡೆದಿದೆ. ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಮಾಡಿದ್ದ ಗ್ಯಾಂಗ್ ಅನ್ನು ಆರೋಗ್ಯ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಓರ್ವ ಮಹಿಳೆ ಸೇರಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಬನ್ನೂರಿನ ಪ್ರತಿಷ್ಠಿತ ನರ್ಸಿಂಗ್ ಹೋಂ ಒಂದರ ಕೈವಾಡ ಶಂಕೆ ಕೂಡ ವ್ಯಕ್ತವಾಗಿದ್ದು, ವರುಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಡೆದ ಘಟನೆಯೇನು?
ಮೈಸೂರು ತಾಲ್ಲೂಕು ಮೆಲ್ಲಹಳ್ಳಿ ಬಳಿಯ ಹುನಗನಹಳ್ಳಿ ಗ್ರಾಮದ ಹೊರವಲಯದಲ್ಲಿರುವ ಐಶಾರಾಮಿ ಬಂಗಲೆಯಲ್ಲಿ ಭ್ರೂಣ ಲಿಂಗ ಪತ್ತೆ ಹಾಗೂ ಹತ್ಯೆ ಮಾಡಲಾಗುತ್ತಿತ್ತು. ಈ ಐಶಾರಾಮಿ ಬಂಗಲೆಗೆ ಗರ್ಭಿಣಿಯರನ್ನು ಕರೆದುಕೊಂಡು ಬಂದು ಅವರ ಭ್ರೂಣದ ಲಿಂಗ ಪತ್ತೆ ಕೆಲಸ ಮಾಡಲಾಗುತಿತ್ತು. ಅದು ಹೆಣ್ಣಾ ಅಥವಾ ಗಂಡಾ ಎಂದು ಪತ್ತೆ ಮಾಡಲು ಅವರ ಬಳಿ ಸಾವಿರಾರು ರೂಪಾಯಿ ಹಣ ಪೀಕಲಾಗುತಿತ್ತು. ಮನೆಯಲ್ಲಿ ಹಣಕಾಸಿನ ಡೈರಿ ಪತ್ತೆಯಾಗಿದ್ದು ಅದರಲ್ಲಿದ್ದ ಬೆಚ್ಚಿಬೀಳಿಸುವ ಸಂಗತಿ ಬಯಲಾಗಿದೆ
