ಸದನದಲ್ಲಿ ಶಾಸಕರು ಪಕ್ಷಭೇದ ಮರೆತು ಒಂದಾಗಿ ಧ್ವನಿಯೆತ್ತುವುದು ತೀರಾ ಅಪರೂಪ. ಅಂತಹ ಅಪರೂಪದ ಕ್ಷಣಕ್ಕೆ ಮಂಗಳವಾರ ವಿಧಾನಸಭೆ ಸಾಕ್ಷಿಯಾಯಿತು. ‘ಮಾಹಿತಿ ಹಕ್ಕು ಕಾಯ್ದೆ (ಆರ್‌ಟಿಐ) ದುರ್ಬಳಕೆ ಮಾಡಿಕೊಂಡು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಆರ್‌ಟಿಐ ಕಾರ್ಯಕರ್ತರಿಗೆ ಕಡಿವಾಣ ಹಾಕಬೇಕು’ ಎಂದು ವಿಧಾನಸಭೆಯಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷ ಒಂದಾಗಿ ಒತ್ತಾಯಿಸಿದವು. ಕೆಟ್ಟ ತೆಂಗಿನಕಾಯಿಗೆ ಕೊಳೆತ ಕುಂಬಳಕಾಯಿ ಸೇರಿಸಿದಂತೆ, ಆಡಳಿತ ಪಕ್ಷದ ಸದಸ್ಯ ಕೌಜಲಗಿ ಮಹಾಂತೇಶ್ ಕೇಳಿದ ಪ್ರಶ್ನೆಯನ್ನು ವಿರೋಧ ಪಕ್ಷದ ಸದಸ್ಯರಲ್ಲೊಬ್ಬರಾಗಿರುವ ಬಸನಗೌಡ ಪಾಟೀಲ್‌ಯತ್ನಾಳ್ ಬೆಂಬಲಿಸಿದರು. ‘‘ಆರ್‌ಟಿಐ ಕಾರ್ಯಕರ್ತರು ಭವ್ಯ ಬಂಗಲೆಗಳನ್ನು ಕಟ್ಟಿಕೊಂಡು ಮನೆ ಮುಂದೆ ಕಾರುಗಳನ್ನು ನಿಲ್ಲಿಸಿಕೊಂಡು ವೈಭೋಗದ ಜೀವನ ನಡೆಸುತ್ತಿದ್ದಾರೆ. ಇವರಿಗೆ ಹಣ ಎಲ್ಲಿಂದ ಬರುತ್ತದೆ?’’ ಎಂದು ಯತ್ನಾಳ್ ಕೇಳಿದರು. ‘‘ಆರ್‌ಟಿಐ ಕಾರ್ಯಕರ್ತರ ಭ್ರಷ್ಟಾಚಾರವನ್ನು ತಡೆಗಟ್ಟಲು ಅಗತ್ಯ ಕಾನೂನು ರೂಪಿಸಬೇಕು. ಅಲ್ಲದೆ ಇವರ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು’’ ಎಂದು ವಿಧಾನಸಭೆಯಲ್ಲಿ ಒತ್ತಾಯಿಸಲಾಯಿತು. ಈ ಸಂಬಂಧ ಚರ್ಚೆಗೆ ವಿಶೇಷ ಕಾಲಾವಕಾಶ ನೀಡಬೇಕು ಎಂದು ಕೆಲವು ಶಾಸಕರು ಆಗ್ರಹಿಸಿದರಾದರೂ, ಸ್ಪೀಕರ್ ನಿರಾಕರಿಸಿದರು.
ದುರ್ಬಲಗೊಳ್ಳುತ್ತಿರುವ ಆರ್‌ಟಿಐ ಕಾಯ್ದೆ ಮತ್ತು ವಿವಿಧೆಡೆ ಹತ್ಯೆಗೀಡಾಗುತ್ತಿರುವ ಮತ್ತು ನಿರಂತರ ಹಲ್ಲೆಗೀಡಾಗುತ್ತಿರುವ ಆರ್‌ಟಿಐ ಕಾರ್ಯಕರ್ತರ ಪರವಾಗಿ ಸದನಲ್ಲಿ ಚರ್ಚೆ ನಡೆಯುವುದು ಇಂದಿನ ಅಗತ್ಯವಾಗಿತ್ತು. ಆರ್‌ಟಿಐ ಕಾರ್ಯಕರ್ತರ ಮೇಲೆ ಇತ್ತೀಚಿನ ದಿನಗಳಲ್ಲಿ ಹಲ್ಲೆಗಳು ಹೆಚ್ಚುತ್ತಿವೆ ಎನ್ನುವುದನ್ನು ಸಮೀಕ್ಷೆಗಳು ಹೇಳುತ್ತಿವೆ. ಈ ಕಾಯ್ದೆ ಜಾರಿಗೆ ಬಂದ ದಿನದಿಂದ ಇಲ್ಲಿಯವರೆಗೆ 80ಕ್ಕೂ ಅಧಿಕ ಕಾರ್ಯಕರ್ತರನ್ನು ಹತ್ಯೆಗೈಯಲಾಗಿದೆ. ಕೇವಲ ಬಿಹಾರ ರಾಜ್ಯವೊಂದರಲ್ಲೇ 11 ವರ್ಷಗಳಲ್ಲಿ 21 ಕಾರ್ಯಕರ್ತರನ್ನು ಕೊಂದು ಹಾಕಲಾಗಿದೆ. ಕರ್ನಾಟಕದಲ್ಲಿ ಸುಮಾರು 6 ಮಂದಿ ಮಾಹಿತಿ ಹಕ್ಕು ಕಾರ್ಯಕರ್ತರು ತಮ್ಮ ಹೋರಾಟದಲ್ಲಿ ಪ್ರಾಣ ತೆತ್ತಿದ್ದಾರೆ. ಮಾಹಿತಿ ಹಕ್ಕು ಕಾರ್ಯಕರ್ತರು ಎದುರಿಸುತ್ತಿರುವ ಸವಾಲುಗಳಿಗೆ ಹಲವು ಮುಖಗಳಿವೆ. ಒಂದೆಡೆ, ಅವರಿಗೆ ಮಾಹಿತಿಗಳು ದೊರಕದಂತೆ ಗರಿಷ್ಠ ಮಟ್ಟದಲ್ಲಿ ಕಾನೂನನ್ನು ದುರ್ಬಲಗೊಳಿಸುತ್ತಾ ಬರಲಾಗಿದೆ. ಯಾವುದೇ ಇಲಾಖೆಗಳಲ್ಲಿ ಮಾಹಿತಿಗಳನ್ನು ಕೇಳಿದಾಗ ನೂರು ಬಗೆಯ ಸಬೂಬುಗಳನ್ನು ಅವರು ಎದುರಿಸಬೇಕಾಗುತ್ತದೆ. ಈ ಮಾಹಿತಿಗಳು ಕೈಗೆ ಸಿಕ್ಕಿದರೂ ಅದನ್ನು ಪ್ರಕಟಿಸುವ, ಪ್ರಶ್ನಿಸುವ ವಾತಾವರಣವೂ ನಮ್ಮ ನಡುವೆ ಇಲ್ಲ. ಬೇರೆ ಬೇರೆ ರೀತಿಯಲ್ಲಿ ಅವರನ್ನು ಬೆದರಿಸುವ ಪ್ರಯತ್ನಗಳು ನಡೆಯುತ್ತವೆ. ಅನೇಕ ಸಂದರ್ಭಗಳಲ್ಲಿ ಕಾರ್ಯಕರ್ತರ ಮೇಲೆ ಸುಳ್ಳು ದೂರುಗಳನ್ನು ದಾಖಲಿಸಿ ಅವರಿಗೆ ಮಾನಸಿಕ ಚಿತ್ರಹಿಂಸೆಯನ್ನು ನೀಡಲಾಗುತ್ತದೆ. ಇದರ ಬೆನ್ನಿಗೇ ಜೀವ ಬೆದರಿಕೆಗಳನ್ನು ಒಡ್ಡುವ ಮೂಲಕ ಅವರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಗಣಿ ಮಾಫಿಯಾ, ಮರಳು ಮಾಫಿಯಾ ಇತ್ಯಾದಿಗಳನ್ನು ಎದುರು ಹಾಕಿಕೊಂಡರೆ, ಸಾರ್ವಜನಿಕವಾಗಿ ಓಡಾಡುವಂತೆಯೂ ಇಲ್ಲ. ಇವೆಲ್ಲದರ ಮಧ್ಯೆ ನಮ್ಮ ಜನಪ್ರತಿನಿಧಿಗಳು, ಅಧಿಕಾರಿಗಳು ಜನರ ಹಣವನ್ನು ಹೇಗೆ ಬಳಸುತ್ತಿದ್ದಾರೆ ಎನ್ನುವುದರ ಮಾಹಿತಿಗಳನ್ನು ಆರ್‌ಟಿಐ ಕಾರ್ಯಕರ್ತರು ಜನರಿಗೆ ತಲುಪಿಸುವ ಪ್ರಯತ್ನ ನಡೆಸುತ್ತಿದ್ದಾರೆ
ಮಾಹಿತಿ ಹಕ್ಕು ಹೋರಾಟಗಾರರಿಂದಾಗಿ ಹತ್ತು ಹಲವು ಭ್ರಷ್ಟಾಚಾರಗಳು ಬೆಳಕಿಗೆ ಬಂದಿವೆ. ಮಾಹಿತಿ ಹಕ್ಕು ಕಾಯ್ದೆಯನ್ನು ಜಾರಿಗೊಳಿಸಿದ್ದು ಯುಪಿಎ ಸರಕಾರವೇ ಆಗಿದ್ದರೂ, ಬಳಿಕ ಅದೇ ಕಾಯ್ದೆಯನ್ನು ಬಳಸಿಕೊಂಡು ಯುಪಿಎ ಸರಕಾರದೊಳಗಿರುವ ಭ್ರಷ್ಟಾಚಾರವನ್ನು ಬಯಲಿಗೆಳೆದು, ಅವರನ್ನು ಅಧಿಕಾರದಿಂದ ಇಳಿಸಲಾಯಿತು. ಯುಪಿಎ ಸರಕಾರದೊಳಗೆ ಅದೆಷ್ಟು ಭ್ರಷ್ಟರಿದ್ದರೂ, ಆ ಸರಕಾರ ಇಂದಿನ ಸರಕಾರದಂತೆ ಆತ್ಮಸಾಕ್ಷಿಯನ್ನು ಸಂಪೂರ್ಣ ಕಳೆದುಕೊಂಡಿರಲಿಲ್ಲ. ಆದುದರಿಂದಲೇ, ಭ್ರಷ್ಟಾಚಾರವನ್ನು ಪ್ರಶ್ನಿಸುವ ಮುಕ್ತ ಅವಕಾಶವನ್ನು ಜನರಿಗೆ ನೀಡಿತು. ಇಂದು ಮೋದಿ ನೇತೃತ್ವದ ಸರಕಾರ ಮಾಹಿತಿ ಹಕ್ಕನ್ನು ಮತ್ತೆ ದುರ್ಬಲಗೊಳಿಸಿ ಮಾಹಿತಿಗಳು ಜನರ ಕೈಗೆ ದೊರಕದಂತೆ ನೋಡಿಕೊಳ್ಳುತ್ತಿದೆ. ಇಂತಹ ಸಂದರ್ಭದಲ್ಲಿ, ತಮ್ಮ ಮಿತಿಯಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿರುವ ಮಾಹಿತಿ ಹಕ್ಕು ಕಾರ್ಯಕರ್ತರ ಪರವಾಗಿ ವಿಧಾನಸಭೆಯಲ್ಲಿ ಶಾಸಕರು ಮಾತನಾಡಬೇಕಾಗಿದೆ. ಅವರಿಗೆ ಭದ್ರತೆಯನ್ನು ನೀಡುವ ಕುರಿತಂತೆ ಸರಕಾರವನ್ನು ಒತ್ತಾಯಿಸಬೇಕಾಗಿದೆ. ಆದರೆ ಕೆಲವು ಶಾಸಕರು, ಸಚಿವರು ಮಾಹಿತಿ ಹಕ್ಕು ಕಾರ್ಯಕರ್ತರ ಕೈಗಳನ್ನು ಇನ್ನಷ್ಟು ಬಿಗಿಯಾಗಿ ಕಟ್ಟಿ ಹಾಕಲು ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸುತ್ತಿರುವುದು ಖೇದಕರ. ಪ್ರಜೆಗಳೇ ಪ್ರಭುಗಳು ಎನ್ನುವ ಮಾತಿಗೆ ಅರ್ಥಕೊಟ್ಟ ಕಾಯ್ದೆಯನ್ನು ಇನ್ನಷ್ಟು ಮೂಲೆಗುಂಪು ಮಾಡಿ, ಪ್ರಜೆಗಳ ಬಾಯಿ ಮುಚ್ಚಿಸಿ ತಾವೇ ಪ್ರಭುಗಳಾಗಿ ಮೆರೆಯುವ ಹುನ್ನಾರ ಅವರಲ್ಲಿ ಎದ್ದು ಕಾಣುತ್ತದೆ.
ಆರ್‌ಟಿಐ ಕಾರ್ಯಕರ್ತರು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ’ ಎಂದು ಹೆಗಲು ಮುಟ್ಟಿಕೊಳ್ಳುತ್ತಿರುವ ಶಾಸಕರು ಈ ಮೂಲಕ ತಮ್ಮನ್ನು ತಾವೇ ಭ್ರಷ್ಟರೆಂದು ಘೋಷಿಸಿಕೊಂಡಂತಾಗಿದೆ. ಆರ್‌ಟಿಐ ಕಾರ್ಯಕರ್ತರು ಬ್ಲಾಕ್‌ಮೇಲ್ ಮಾಡುವುದು ತಪ್ಪು ನಿಜ. ಆದರೆ ಬ್ಲ್ಯಾಕ್‌ಮೇಲ್‌ಗೆ ಒಳಗಾಗುವಂತಹ ಭ್ರಷ್ಟಾಚಾರಗಳಲ್ಲಿ ಶಾಸಕರು, ಅಧಿಕಾರಿಗಳು ಸಿಲುಕಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ? ಎನ್ನುವುದಕ್ಕೆ ಇವರು ಉತ್ತರಿಸಬೇಕು. ಮಾಹಿತಿಗಳಲ್ಲಿ ಸತ್ಯಾಂಶಗಳಿದ್ದಾಗ ಮಾತ್ರ ಶಾಸಕರಾಗಲಿ, ಅಧಿಕಾರಿಗಳಾಗಲಿ ಆರ್‌ಟಿಐ ಕಾರ್ಯಕರ್ತರಿಗೆ ಹೆದರಬೇಕಾಗುತ್ತದೆ. ‘ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಕಾರು, ಮನೆ ಎಲ್ಲಿಂದ ಬರುತ್ತದೆ?’ ಪ್ರಶ್ನೆಯನ್ನು ಯತ್ನಾಳ್ ಕೇಳಿದ್ದಾರೆ. ಈ ಪ್ರಶ್ನೆಯನ್ನು ಎಲ್ಲ ಶಾಸಕರು, ಸಚಿವರು ತಮಗೆ ತಾವೇ ಮೊದಲು ಕೇಳಿ ಕೊಳ್ಳಬೇಕು. ಶಾಸಕರಾದ ಬೆನ್ನಿಗೇ ಅವರ ಸಂಪತ್ತು ಏಕಾಏಕಿ ಹೆಚ್ಚುವುದು ಹೇಗೆ? ಶಾಸಕನಾಗುವ ಮುನ್ನ ಉಳಿದುಕೊಳ್ಳಲು ಸಣ್ಣ ಸೂರು ಇಲ್ಲದವರು ಎರಡು ಬಾರಿ ಶಾಸಕರಾದಾಕ್ಷಣ ಕಾರು, ಬಂಗಲೆಗಳನ್ನು ಮಾಡಿಕೊಳ್ಳುವುದು ಹೇಗೆ? ಹೀಗೆಂದು ಆರ್‌ಟಿಐ ಕಾರ್ಯಕರ್ತರಲ್ಲಿ ‘ಬ್ಲ್ಯಾಕ್‌ಮೇಲರ್’ಗಳು ಇಲ್ಲ ಎಂದಲ್ಲ. ಈ ಕಾಯ್ದೆಯನ್ನು ಹಲವರು ದುರುಪಯೋಗಪಡಿಸಿಕೊಳ್ಳುತ್ತಿರುವುದು ಸುಳ್ಳಲ್ಲ. ಆದರೆ, ಭ್ರಷ್ಟರ ಸಂಖ್ಯೆ ಹೆಚ್ಚಿದಾಗ ಮಾತ್ರ ಇಂತಹ ದುರುಪಯೋಗಗಳಲ್ಲೂ ಹೆಚ್ಚಳ ಕಂಡು ಬರುತ್ತದೆ. ಅಧಿಕಾರಿಗಳು, ಶಾಸಕರು ಭ್ರಷ್ಟಾಚಾರಗಳನ್ನು ನಿಲ್ಲಿಸಿದಾಗ, ಮಾಹಿತಿ ಹಕ್ಕು ಹೋರಾಟದ ಹೆಸರಿನಲ್ಲಿ ನಡೆಯುವ ದುರುಪಯೋಗಗಳೂ ತನ್ನಷ್ಟಕ್ಕೆ ನಿಲ್ಲುತ್ತದೆ. ಅದಕ್ಕಾಗಿ ಪ್ರತ್ಯೇಕ ಕಾಯ್ದೆಯೊಂದರ ಅಗತ್ಯ ಖಂಡಿತಾ ಇಲ್ಲ.
