ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಪ್ರತಿಭಟನೆ ಕುರಿತು ಸಚಿವ ಶಿವಾನಂದ ಪಾಟೀಲ್ ಜೊತೆ ಚರ್ಚೆ ನಡೆಸಲಾಗಿದ್ದು, ಆದಷ್ಟು ಬೇಗ ಕಬ್ಬಿಗೆ ಬೆಲೆ ನಿಗದಿ ಮಾಡಿ ಸಮಸ್ಯೆ ಬಗೆಹರಿಸುವಂತೆ ತಿಳಿಸಲಾಗಿದೆ. ಇಲ್ಲದಿದ್ರೆ ಪೊಲೀಸರಿಗೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ ಆಗುತ್ತದೆ ಎಂದು ತಿಳಿಸಿದ್ದೇನೆಂದು ಹೇಳಿದರು.
ಸತೀಶ್ ಜಾರಕಿಹೊಳಿ ಸೇರಿ ಆ ಭಾಗದ ಸಚಿವರು ಸಮಸ್ಯೆ ಬಗೆಹರಿಸುವ ಭರವಸೆ ಕೊಟ್ಟಿದ್ದಾರೆ. ನಿನ್ನೆ ಒಬ್ಬರು ರೈತರು ಆತ್ಮಹತ್ಯೆ ಪ್ರಯತ್ನ ಮಾಡಿದ್ದರು. ಪೊಲೀಸರು ಅವರನ್ನು ರಕ್ಷಣೆ ಮಾಡಿದ್ದಾರೆ. ಈ ರೀತಿಯ ಘಟನೆಗಳು ಮರುಕಳಿಸಬಾರದು. ಬಿಜೆಪಿಯವರು ಸಹಜವಾಗಿ ಇಂತಹ ಸಂದರ್ಭದಲ್ಲಿ ಬೆಂಬಲ ಕೊಟ್ಟಿದ್ದಾರೆ. ಇಂತಹ ಅವಕಾಶ ಮತ್ತೆ ಸಿಕ್ಕರೆ ಬಿಡುತ್ತಾರಾ? ಸರ್ಕಾರ ಕುರ್ಚಿ ಕಚ್ಚಾಟದಲ್ಲಿ ತೊಡಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನಾಗಿತ್ತು ಎಂದು ಅವರೇ ನೋಡಿಕೊಳ್ಳಲಿ ಎಂದು ತಿರುಗೇಟು ನೀಡಿದರು.
ಸಚಿವ ಸಂಪುಟ ಪುನಾರಚನೆ ಕುರಿತು ಮಾತನಾಡಿ, ಈ ಕುರಿತು ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ. ನಾವೆಲ್ಲರೂ ಹೈಕಮಾಂಡ್ ನಿರ್ಧಾರಗಳನ್ನು ಗೌರವಿಸುತ್ತೇವೆ ಮತ್ತು ಅನುಸರಿಸುತ್ತೇವೆ. ಪಾಲಿಸದವರ ವಿರುದ್ಧ ಕ್ರಮ ಕೈಗೊಳ್ಳಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದು ಸರಿ. ಹೈಕಮಾಂಡ್ ಏನು ನಿರ್ಧರಿಸುತ್ತದೆಯೋ ಅದನ್ನು ನಾವು ಕೇಳುತ್ತೇವೆಂದು ತಿಳಿಸಿದರು.
