ಕಾಂಗ್ರೆಸ್ ಪಕ್ಷ ಕೂಡ ರಾಹುಲ್ ಗಾಂಧಿಯಂತೆಯೇ ಗೊಂದಲದಲ್ಲಿದೆ: ರಾಮಮಂದಿರ ಉದ್ಘಾಟನೆ ಬಗ್ಗೆ ಪ್ರಹ್ಲಾದ್ ಜೋಶಿ ಹೇಳಿದ ಮಾತಿದು
January 01, 2024
ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮಮಂದಿರವನ್ನು ಉದ್ಘಾಟಿಸಲು ನರೇಂದ್ರ ಮೋದಿ ಸರ್ಕಾರವು ಸಜ್ಜಾಗುತ್ತಿದೆ, ಇದೇ ವೇಳೆ ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್ ಜೋಶಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ದೇವಾಲಯದ ಉದ್ಘಾಟನೆಯಲ್ಲಿ ಕಾಂಗ್ರೆಸ್ ಪಾಲ್ಗೋಳ್ಳುವುದರ ಕುರಿತು ಮಾತನಾಡಿದ್ದಾರೆ.
ಇತ್ತೀಚೆಗೆ ಮುಕ್ತಾಯಗೊಂಡ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಸಂಸದರ ಅಮಾನತು ಮತ್ತು ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಭವಿಷ್ಯದ ಬಗ್ಗೆಯೂ ಅವರು ಮಾತನಾಡಿದರು. ಲೋಕಸಭೆಯಲ್ಲಿ ಧಾರವಾಡ ಕ್ಷೇತ್ರವನ್ನು ಪ್ರತಿನಿಧಿಸುತ್ತಿರು ಜೋಶಿ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಮತ್ತು ಚುನಾವಣಾ ಪ್ರಚಾರದ ಭರವಸೆಗಳ ಭಾಗವಾಗಿರುವ ಭರವಸೆಗಳ ಬಗ್ಗೆಯೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಕಾಂಗ್ರೆಸ್ ನಾಯಕರು ಬರುತ್ತಾರಾ?
ಕಾಂಗ್ರೆಸ್ ತನ್ನ ನಾಯಕ ರಾಹುಲ್ ಗಾಂಧಿಯಂತೆಯೇ ಗೊಂದಲದಲ್ಲಿದೆ. ಅವರು ಬರುತ್ತಾರೋ ಇಲ್ಲವೋ ಎಂದು ಹೇಳಲು ನಾನು ಜ್ಯೋತಿಷಿಯಲ್ಲ. ಆದರೆ ಇದೇ ಜನರು ರಾಮನ ಅಸ್ತಿತ್ವವನ್ನು ಮತ್ತು ದೇವಾಲಯದ ಅಸ್ತಿತ್ವವನ್ನು ಸ್ವಲ್ಪ ಸಮಯದ ಹಿಂದೆ ವಿರೋಧಿಸಿದರು. ಈ ನಾಯಕರು ರಾಮಮಂದಿರ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡರೆ, ಅಲ್ಪಸಂಖ್ಯಾತ ಮತದಾರರು ಏನು ಯೋಚಿಸುತ್ತಾರೆ ಎಂಬ ಸಂದಿಗ್ಧತೆಗೆ ಸಿಲುಕಿದ್ದಾರೆ. ಅಲ್ಪಸಂಖ್ಯಾತ ಮತಗಳನ್ನು ಕಳೆದುಕೊಳ್ಳುವ ಭಯದಲ್ಲಿದ್ದಾರೆ , ಒಂದು ವೇಳೆ ಅವರು ಹಾಜರಾಗದಿದ್ದರೆ, ಮೆಜಾರಿಟಿ ಜನತೆ ಏನು ಹೇಳುತ್ತಾರೆಂದು ಸಂದಿಗ್ಧತೆ. ಇದರಿಂದಾಗಿಯೇ ಅವರು ಗೊಂದಲದಲ್ಲಿದ್ದಾರೆ.
