ಗ್ಯಾರಂಟಿ ಯೋಜನೆಗಳ ಕುರಿತು ಅಪಪ್ರಚಾರಗಳ ನಿಲ್ಲಿಸಿ ಎಂದು ಸ್ವಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸೂಚನೆ ನೀಡಿದರು
January 10, 2024
ಹಣವಿಲ್ಲದೆ ದೊಡ್ಡ ದೊಡ್ಡ ಕಾರ್ಯಕ್ರಮಗಳು ನಡೆಯಲು ಸಾಧ್ಯವೇ? ಗ್ಯಾರಂಟಿ ಯೋಜನೆಗಳ ಕುರಿತು ಮೊದಲು ನೀವು ಅಪಪ್ರಚಾರಗಳ ನಿಲ್ಲಿಸಿ ಎಂದು ಸ್ವಪಕ್ಷದ ನಾಯಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಸೂಚನೆ ನೀಡಿದರು.
ಕೆಪಿಸಿಸಿ ಕಚೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಸರ್ಕಾರಕ್ಕೆ ದೊಡ್ಡ ಹೊರೆಯೇನಲ್ಲ. ಪರಿಣಾಮಕಾರಿಯಾಗಿ ಗ್ಯಾರಂಟಿಗಳ ಅನುಷ್ಠಾನವಾಗಬೇಕು ಎಂಬ ಕಾರಣಕ್ಕೆ 16 ಕೋಟಿ ರೂ.ಗಳನ್ನು ಭರಿಸುತ್ತೇವೆ. ಗ್ಯಾರಂಟಿಗಳು ಜಾರಿಯಾಗಿರದಿದ್ದರೆ ಬರಗಾಲದ ಹಾಹಾಕಾರ ಎದ್ದಿರುತ್ತಿತ್ತು. ರಾಜ್ಯದ 223 ತಾಲ್ಲೂಕುಗಳು ಬರಗಾಲ ಪೀಡಿತವಾಗಿದ್ದರೂ ಮೇವಿಗೆ, ಕುಡಿಯುವ ನೀರಿಗೆ, ಉದ್ಯೋಗ ಖಾತ್ರಿಗೆ ತೊಂದರೆಯಾಗಿಲ್ಲ ಎಂದು ಹೇಳಿದರು.
ನಾವು ಸತ್ಯ ಹೇಳಿ ರಾಜಕೀಯ ಲಾಭವನ್ನು ಪಡೆಯುವ ಪ್ರಯತ್ನ ಮಾಡಬೇಕು. ಗ್ಯಾರಂಟಿಗಳನ್ನು ಅಪಹಾಸ್ಯ, ಅವಹೇಳನ ಮಾಡಿದವರೇ ಈಗ ಮೋದಿ ಗ್ಯಾರಂಟಿ ಎಂದು ಶುರು ಮಾಡಿದ್ದಾರೆ. ನಾವು ಜನರಿಗೆ ಸತ್ಯವನ್ನು ಹೇಳಬೇಕು. ಭಾರತದ ಇತಿಹಾಸದಲ್ಲಿ ಯಾವ ಸರ್ಕಾರವೂ ಈ ರೀತಿಯ ಗ್ಯಾರಂಟಿ ಕಾರ್ಯಕ್ರಮಗಳನ್ನು ಜಾರಿ ಮಾಡಿಲ್ಲ. ಇದರಿಂದ ಬಡವರಿಗೆ ಆರ್ಥಿಕ, ಸಾಮಾಜಿಕ ಶಕ್ತಿ ತುಂಬಲು ಸಾಧ್ಯವಾಗುತ್ತದೆ. ದಲಿತರು, ಹಿಂದುಳಿದವರು, ಮಹಿಳೆಯರಿಗೆ ಅನುಕೂಲವಾಗಲಿದೆ. ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ, ಗೃಹಲಕ್ಷ್ಮಿ ಯೋಜನೆಗಳು ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ.
