ಪಕ್ಷೇತರರಾಗಿ ಶಿವಮೊಗ್ಗದಲ್ಲಿ ಸ್ಪರ್ಧಿಸುವಂತೆ ಒತ್ತಡ ಬರ್ತಿದೆ: ಕುತೂಹಲ ಸೃಷ್ಟಿಸಿದ ಕೆಎಸ್ ಈಶ್ವರಪ್ಪ ಹೇಳಿಕೆ
March 13, 2024
ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಕೆಇ ಕಾಂತೇಶ್ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಲಿದೆ ಎಂಬ ಚರ್ಚೆ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಅವರ ಬಂಡಾಯಕ್ಕೆ ಕಾರಣವಾಗಿದೆ. ದಿಢೀರ್ ಸುದ್ದಿಗೋಷ್ಠಿ ನಡೆಸಿ ಪಕ್ಷೇತರರಾಗಿ ಶಿವಮೊಗ್ಗದಲ್ಲಿ ಸ್ಪರ್ಧಿಸಬೇಕು ಎಂಬ ಒತ್ತಡ ಬರುತ್ತಿದೆ. ಹಿತೈಷಿಗಳ ಜೊತೆ, ಜನರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತೇನೆ. ಕಾದು ನೋಡಿ ಎಂದು ಕೆಎಸ್ ಈಶ್ವರಪ್ಪ ಹೇಳಿರುವುದು ಕುತೂಹಲ ಕೆರಳಿಸಿದೆ.ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಟಿವಿಯಲ್ಲಿ ಏನ್ ಬೇಕಾದರೂ ಹಾಕಿಕೊಳ್ಳಲಿ ನಾನೇನು ಹೇಳುವುದಿಲ್ಲ. ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ. ನೀವು ಪಕ್ಷೇತರ ನಿಲ್ಲಬೇಕು ಅಂತ ಒತ್ತಡ ಹಾಕುತ್ತಿದ್ದಾರೆ, ಈ ಬಗ್ಗೆ ಸಭೆ ಕರೆದಿದ್ದಾರೆ. ನಾನು ಸಹ ಆ ಸಭೆಯಲ್ಲಿ ಭಾಗವಹಿಸುತ್ತೇನೆ. ಆಮೇಲೆ ತೀರ್ಮಾನ ಮಾಡುತ್ತೇನೆ. ಭಾರತೀಯ ಜನತಾ ಪಾರ್ಟಿಯು ಸಂಸ್ಕಾರ ಕಲಿಸಿಕೊಟ್ಟಿದೆ. ನಾಲ್ಕು ಗೋಡೆ ನಡುವೆ ಕುಳಿತು ತೀರ್ಮಾನ ಮಾಡಬೇಕು ಎಂದು ಹೇಳಿಕೊಟ್ಟಿದೆ. ಏನ್ ಆಗುತ್ತೆ ಎಂಬುದನ್ನು ಕಾದು ನೋಡಿ ಎಂದರು.
