ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಅಜೆಂಡಾ'- ಶಿವಮೊಗ್ಗದಲ್ಲಿ ಪ್ರಧಾನಿ ಮೋದಿ

Waves of Karnataka


 ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಕರ್ನಾಟಕದಲ್ಲಿ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಪ್ರಚಾರ ನಡೆಸಿದ ನರೇಂದ್ರ ಮೋದಿ ಕಾಂಗ್ರೆಸ್‌ ಹಾಗೂ ಐಎನ್‌ಡಿಐಎ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್‌ ನಾಯಕರು ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ. ಕಾಂಗ್ರೆಸ್‌ಗೆ ಅಭಿವೃದ್ಧಿ ಅಜೆಂಡಾ ಇಲ್ಲ, ಸುಳ್ಳಿನ ಮೇಲೆ ಸುಳ್ಳು ಹೇಳುವುದೇ ಅವರ ಅಜೆಂಡಾ ಎಂದು ಕಿಡಿಕಾರಿದರು. ಅದಲ್ಲದೇ ಐಎನ್‌ಡಿಐಎ ನಾಯಕರು ನಮ್ಮ ದೇಶಕ್ಕೆ ಅವಮಾನ ಮಾಡುತ್ತಿದ್ದಾರೆ. ಇದರ ಪ್ರತಿಫಲವನ್ನು ಈ ಚುನಾವಣೆಯಲ್ಲಿ ಅನುಭವಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸುಳ್ಳುಗಳ ಮೇಲೆ ಸುಳ್ಳುಗಳನ್ನು ಹೇಳುವುದು ಕಾಂಗ್ರೆಸ್‌ನ ಕೆಲಸವಾಗಿದೆ. ಕರ್ನಾಟಕದಲ್ಲಿ ನಾಲ್ವರು ಸಿಎಂಗಳ ಜೊತೆಗೆ ದಿಲ್ಲಿಯ ಕಲೆಕ್ಷನ್‌ ಮಿನಿಸ್ಟರ್‌ ಬೇರೆ ಇದ್ದು, ಕರ್ನಾಟಕವನ್ನು ಲೂಟಿ ಮಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದ್ದಾರೆ. ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ವಿಕಸಿತ ಭಾರತ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಬಳಿ ಅಭಿವೃದ್ಧಿಯ ಅಜೆಂಡಾ ಇಲ್ಲ. ಸುಳ್ಳು ಹೇಳುವುದೇ ಕಾಂಗ್ರೆಸ್‌ನ ಮೊದಲ ಅಜೆಂಡಾ, ತಮ್ಮ ಸುಳ್ಳುಗಳನ್ನು ಸಮರ್ಥಿಸಿಕೊಳ್ಳಲು ಮತ್ತೊಂದು ಸುಳ್ಳು ಹೇಳುವುದು ಅವರ ಎರಡನೇ ಅಜೆಂಡಾ. ಕರ್ನಾಟಕದಲ್ಲೂ ಕಾಂಗ್ರೆಸ್‌ ಇದನ್ನೇ ಮಾಡಿದೆ.

ಜೂನ್‌ 4ಕ್ಕೆ 400 ಸೀಟ್‌ಗಳು ಎನ್‌ಡಿಗೆ ಬರಲಿವೆ. ವಿಕಸಿತ ಭಾರತಕ್ಕಾಗಿ, ವಿಕಸಿತ ಕರ್ನಾಟಕಕ್ಕಾಗಿ ಹಾಗೂ ಭ್ರಷ್ಟಾಚಾರಿಗಳ ವಿರುದ್ಧ ಹೋರಾಡಲು, ಯುವಜನರ ಅಭಿವೃದ್ಧಿಗಾಗಿ, ರೈತರ ಅಭಿವೃದ್ಧಿಗಾಗಿ 400ಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಎನ್‌ಡಿಎ ಗೆಲ್ಲಬೇಕಿದೆ. ಆದ್ದರಿಂದ ಕರ್ನಾಟಕದ 28 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದ ಅವರು, ಎನ್‌ಡಿಎಗೆ ಈ ಬಾರಿ 400 ಮೀರಿ ಎಂದು ಜನರ ಬಳಿಯಿಂದ ಹೇಳಿಸಿದರು.