ಈ ಸಲ ಗೆಲುವು ನಿರ್ಣಯಿಸುವ ಬುಡಕಟ್ಟು ಮತಗಳು ಯಾರಿಗೆ? ಇಲ್ಲಿದೆ ಲೆಕ್ಕಾಚಾರ

Waves of Karnataka


 2024ರ ಲೋಕಸಭೆ ಚುನಾವಣೆ (Lok Sabha Election 2024) ಮೊದಲ ಹಂತಕ್ಕೆ ಕೇವಲ ಹದಿನೈದು ದಿನಗಳು ಬಾಕಿಯಿದ್ದು, ಬಿಜೆಪಿ (BJP) ಮತ್ತು ಕಾಂಗ್ರೆಸ್ (Congress) ನಡುವಿನ ತುರುಸಿನ ಸ್ಪರ್ಧೆಯಲ್ಲಿ ಬುಡಕಟ್ಟು ಮತಗಳು (Scheduled Tribes) ನಿರ್ಣಾಯಕ ಪಾತ್ರವನ್ನು ವಹಿಸುವ ಕೆಲವು ಪ್ರಮುಖ ಹಿಂದಿ ಹೃದಯಭಾಗದ (Hindi heartland states) ರಾಜ್ಯಗಳತ್ತ ಎಲ್ಲರ ಕಣ್ಣು ನೆಟ್ಟಿದೆ.

 ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳ ನಂತರ ಬಿಜೆಪಿ ಲವಲವಿಕೆ ಪಡೆದುಕೊಂಡಿದ್ದು, ಅಲ್ಲಿನ ಬುಡಕಟ್ಟು ಮತಗಳ (Votes) ಕ್ರೋಡೀಕರಣ ಈ ರಾಜ್ಯಗಳನ್ನು ಪಡೆಯಲು ಬಿಜೆಪಿಗೆ ಸಹಾಯ ಮಾಡಿದೆ. ಇಲ್ಲಿ ಈಗ ಕಾಂಗ್ರೆಸ್ ತನ್ನ ಅದೃಷ್ಟವನ್ನು ಪರೀಕ್ಷಿಸಲು ಮತ್ತೆ ಮುಂದಾಗಿದೆ.

ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಮೀಸಲಾದ 47 ಲೋಕಸಭಾ ಕ್ಷೇತ್ರಗಳ ಕದನವು ನಿರ್ಣಾಯಕವಾಗಲಿದೆ ಎಂದು ರಾಜಕೀಯ ವೀಕ್ಷಕರು ಹೇಳುತ್ತಾರೆ. ಇಲ್ಲಿ ಪಕ್ಷಗಳು ತಮ್ಮ ಪೈಪೋಟಿ ನಡೆಸುತ್ತಿವೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿಯು ಬುಡಕಟ್ಟು ಮತಬ್ಯಾಂಕ್‌ಗಳಲ್ಲಿ ಯಶಸ್ವಿಯಾಗಿ ಪ್ರವೇಶಿಸಿದೆ. ಈ ಮತಗಳು ಸಾಂಪ್ರದಾಯಿಕವಾಗಿ ಕಾಂಗ್ರೆಸ್‌ನೊಂದಿಗೆ ದೀರ್ಘಕಾಲ ಇದ್ದವು. ST ಮೀಸಲು ಸ್ಥಾನಗಳಲ್ಲಿ ಬಿಜೆಪಿಯ ಗಳಿಕೆ 2009ರಲ್ಲಿದ್ದ 13 ಸ್ಥಾನಗಳಿಂದ 2014ರಲ್ಲಿ 27ಕ್ಕೆ, 2019ರಲ್ಲಿ 31ಕ್ಕೆ ಏರಿತು. ಹೋಲಿಸಿದರೆ, ಮೀಸಲು ಸ್ಥಾನಗಳಲ್ಲಿ 2009ರಲ್ಲಿ 20 ಸ್ಥಾನಗಳಿದ್ದ ಕಾಂಗ್ರೆಸ್ 2014ರಲ್ಲಿ ಐದು ಸ್ಥಾನಗಳಿಗೆ ಇಳಿದಿದೆ. 2019ರಲ್ಲಿ ಕಾಂಗ್ರೆಸ್ 47 ಮೀಸಲು ಸ್ಥಾನಗಳಲ್ಲಿ ಕೇವಲ ನಾಲ್ಕು ಸ್ಥಾನಗಳನ್ನು ಮಾತ್ರ ಪಡೆಯಲು ಸಾಧ್ಯವಾಗಿದೆ.