532 ಎಕರೆ ಅರಣ್ಯ ಮತ್ತು ಸರ್ಕಾರಿ ಭೂಮಿಯನ್ನು ಕಬಳಿಸಲು ನಕಲಿ ದಾಖಲೆಗಳನ್ನು ಬಳಸಲಾಗಿದೆ ಎಂದು ಹೇಳಲಾದ ಪಿತೂರಿಯ ಬಗ್ಗೆ ಸಿಐಡಿ ತನಿಖೆ ನಡೆಸಿ ನ್ಯಾಯಾಲಯದ ಆದೇಶವನ್ನು ಪಡೆಯಬೇಕೆಂದು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.
ಎಂ.ಬಿ.ನೇಮಣ್ಣ ಗೌಡ ಯಾನೆ ಎಂ.ಬಿ.ಮನ್ಮಥ ಎಂಬ ವ್ಯಕ್ತಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಇನಾಮ್ ರದ್ದು ಕಾಯಿದೆ ಅಡಿ ಹಾಸನದ ವಿಶೇಷ ಜಿಲ್ಲಾಧಿಕಾರಿ ಆದೇಶದಂತೆ ಬೆಂಗಳೂರು ಕೆಂಗೇರಿ ಬಳಿಯ ಬಿಎಂ ಕಾವಲ್ ನಲ್ಲಿ ತಮಗೆ ಮಂಜೂರು ಮಾಡಲಾಗಿದೆ ಎನ್ನಲಾದ 482 ಎಕರೆ ಕಾಯ್ದಿಟ್ಟ ಅರಣ್ಯಭೂಮಿ ಸೇರಿದಂತೆ ಒಟ್ಟು 532 ಎಕರೆ ಜಮೀನಿನ ದಾಖಲೆಗಳನ್ನು 3 ತಿಂಗಳೊಳಗೆ ತಮ್ಮ ಹೆಸರಿಗೆ ಮಾಡಿಕೊಡುವಂತೆ ಆದೇಶ ಪಡೆದಿದ್ದಾರೆ.
90 ದಿನ ಪೂರ್ಣಗೊಳ್ಳಲು 1 ದಿನ ಬಾಕಿ ಇರುವವರೆಗೂ ಸರಕಾರದ ಹೆಚ್ಚುವರಿ ಸರಕಾರಿ ವಕೀಲ ಯೋಗಣ್ಣ ಈ ಮಾಹಿತಿಯನ್ನು ಸರಕಾರಕ್ಕಾಗಲಿ, ಅರಣ್ಯ ಇಲಾಖೆಗಾಗಲಿ ನೀಡಿರುವುದಿಲ್ಲ. ಬದಲಾಗಿ ಮೇಲ್ಮನವಿ ಸಲ್ಲಿಸಲು ಇದು ಸೂಕ್ತ ಪ್ರಕರಣವಲ್ಲ ಎಂದು ನಮೂದಿಸಿ ಅರ್ಜಿದಾರರಿಗೆ ಅನುಕೂಲ ಮಾಡಿಕೊಡುವಂತೆ ವರ್ತಿಸಿದ್ದು, ಇದು ಅನುಮಾನಾಸ್ಪದವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.
