ನಟ-ರಾಜಕಾರಣಿ ವಿಜಯ್ ಗುರುವಾರ ತಮಿಳುನಾಡಿನ ಆಡಳಿತಾರೂಢ ಡಿಎಂಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಅದನ್ನು 'ದುಷ್ಟ ಶಕ್ತಿ' ಎಂದು ಕರೆದಿದ್ದಾರೆ. ದಿವಂಗತ ಎಐಎಡಿಎಂಕೆ ನಾಯಕರಾದ ಎಂಜಿ ರಾಮಚಂದ್ರನ್ ಮತ್ತು ಜೆ ಜಯಲಲಿತಾ ಅವರು ದ್ರಾವಿಡ ಪಕ್ಷವನ್ನು ಗುರಿಯಾಗಿಸಿಕೊಂಡು ಆಗಾಗ್ಗೆ ಬಳಸುತ್ತಿದ್ದ ಪದವನ್ನು ಪುನರಾವರ್ತಿಸಿದ್ದಾರೆ.
ಇಲ್ಲಿ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ತಮಿಳಿಗ ವೆಟ್ರಿ ಕಳಗಂ (ಟಿವಿಕೆ) 'ಶುದ್ಧ ಶಕ್ತಿ'ಯಾಗಿದೆ. ಈಗ ಸ್ಪಷ್ಟವಾಗಿ 2026ರ ಚುನಾವಣಾ ಹೋರಾಟ, ಈ ಇಬ್ಬರ ನಡುವೆ ಮಾತ್ರ ಸೀಮಿತವಾಗಿದೆ ಎಂದು ಹೇಳಿದರು.
ಸೆಪ್ಟೆಂಬರ್ 27 ರಂದು ಕರೂರಿನಲ್ಲಿ ನಡೆದ ಟಿವಿಕೆ ರ್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 41 ಜನರು ಸಾವಿಗೀಡಾದ ನಂತರ, ತಮಿಳುನಾಡಿನಲ್ಲಿ ನಟ ವಿಜಯ್ ನಡೆಸಿದ ಮೊದಲ ಸಾರ್ವಜನಿಕ ಸಭೆ ಇದಾಗಿದೆ.
ಕಾಲ್ತುಳಿತದ ನಂತರ ಅವರು ಕಾಂಚೀಪುರಂನಲ್ಲಿ ಆಯ್ದ ಪ್ರೇಕ್ಷಕರೊಂದಿಗೆ ಮುಚ್ಚಿದ ಬಾಗಿಲಿನ ಸಭೆಯನ್ನು ನಡೆಸಿದ್ದರು ಮತ್ತು ನೆರೆಯ ಪುದುಚೇರಿ ಕೇಂದ್ರಾಡಳಿತ ಪ್ರದೇಶದಲ್ಲಿ ನಡೆದ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.
