ಸಚಿವ ಶಿವಾನಂದ ಪಾಟೀಲ್‌ ಆತ್ಮಹತ್ಯೆ ಮಾಡಿಕೊಳ್ಳಲಿ; ನಾವೇ 10 ಲಕ್ಷ ಕೊಡ್ತೇವೆ,ರೈತರ ಘೋಷಣೆ

Waves of Karnataka


ಪರಿಹಾರದ ಮೊತ್ತ ಹೆಚ್ಚಿಸಿದ ಮೇಲೆ ರೈತರ ಆತ್ಮಹತ್ಯೆ ಕೂಡ ಹೆಚ್ಚಿದೆ ಎಂದಿದ್ದ ಸಚಿವ ಶಿವಾನಂದ ಪಾಟೀಲ್‌ ವಿರುದ್ಧ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಕ್ಕರೆ ಮತ್ತು ಎಪಿಎಂಸಿ ಸಚಿವರು ಆತ್ಮಹತ್ಯೆ ಮಾಡಿಕೊಂಡರೆ 10 ಲಕ್ಷ ರೂ. ಪರಿಹಾರ ನೀಡುವುದಾಗಿ ರೈತರು ಘೋಷಿಸಿದ್ದಾರೆ. ಸಚಿವರೇ ಆತ್ಮಹತ್ಯೆ ಮಾಡಿಕೊಳ್ಳಲಿ ನಾವೇ ನಮ್ಮ ರೈತ ಸಂಘಟನೆಯಿಂದ 10 ಲಕ್ಷ ರೂ. ಪರಿಹಾರವನ್ನು ಸಚಿವರ ಕುಟುಂಬಕ್ಕೆ ಕೊಡುತ್ತೇವೆ ಎಂದು ರೈತ ಮುಖಂಡ ಇಂಗಲಕುಪ್ಪೆ ಕೃಷ್ಣ ಹೇಳಿದ್ದಾರೆ.

ಮಂಡ್ಯದಲ್ಲಿ ರೈತರ ಆತ್ಮಹತ್ಯೆ ವಿಚಾರವಾಗಿ ವ್ಯಂಗ್ಯದ ಹೇಳಿಕೆ ನೀಡಿದ್ದ ಶಿವಾನಂದ ಪಾಟೀಲ್‌ ಪ್ರತಿಕೃತಿ ದಹಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಕೃತಿ ದಹಿಸಿ ಬಾಯಿ ಬಡಿದುಕೊಂಡ ರೈತರು, ಭಿಕ್ಷಾ ಪಾತ್ರೆಯಿಡಿದು ಭಿಕ್ಷೆ ಬೇಡಿ ಶಿವಾನಂದ ಪಾಟೀಲ್‌ ಅವರಿಗೆ ಪರಿಹಾರದ ಹಣವನ್ನು ಸಂಗ್ರಹಿಸಿದರು. ಸಚಿವರು ಆತ್ಮಹತ್ಯೆ ಮಾಡಿಕೊಂಡರೇ ರೈತರೆ ಭಿಕ್ಷೆ ಎತ್ತಿ ಪರಿಹಾರ ಕೊಡ್ತೀವಿ ಎಂದು ರೈತರು ಅಣಕಿಸಿದರು.ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಚಿವ ಶಿವಾನಂದ ಪಾಟೀಲ್ ಮಂಗಳವಾರ ಹೇಳಿದ್ದರು. ವೀರೇಶ್‌ ಕಮಿಟಿ ಬರುವ ಮುನ್ನ ರೈತರ ಆತ್ಮಹತ್ಯೆ ಪ್ರಕರಣಗಳು ಕಡಿಮೆ ಇದ್ದವು. ಮೊದಲು 2 ಲಕ್ಷ ರೂ. ಪರಿಹಾರ ಕೊಡಲಾಗುತ್ತಿತ್ತು. ಪರಿಹಾರ ಹೆಚ್ಚಳವಾದ ನಂತರ ಹೃದಯಾಘಾತ, ಪ್ರೇಮ ವೈಫಲ್ಯ, ಕುಡಿದು ಆತ್ಮಹತ್ಯೆ ಮಾಡಿಕೊಂಡ ಎಲ್ಲವನ್ನೂ ಪರಿಹಾರದ ಆಸೆಗಾಗಿ ರೈತ ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಲಾಗುತ್ತಿದೆ ಎಂದು ಹೇಳಿದ್ದರು.