ಬಿಜೆಪಿ ಒಂದು ಕೋಮುವಾದಿ ಪಕ್ಷ ಎಂದು ಹೇಳಿದ ಬಿಜೆಪಿ ಸಂಸದ ಬಚ್ಚೇಗೌಡ
September 09, 2023
ಬಿಜೆಪಿ ಪ್ರತಿಪಕ್ಷ ಸ್ಥಾನ ಮತ್ತು ಅಧ್ಯಕ್ಷರನ್ನು ಆಯ್ಕೆ ಮಾಡದಿರುವುದಕ್ಕೆ ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರವೇ ಕಾರಣ. ಈ ಮೈತ್ರಿಯಿಂದ ಬಿಜೆಪಿಗೇನು ಲಾಭವಿಲ್ಲ ಎಂದು ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ದಿಶಾ ಸಭೆ ನಂತರ ಮಾತನಾಡಿದ ಅವರು, ವಿಧಾನಸಭೆ ಚುನಾವಣೆ ನಂತರ ಬಿಜೆಪಿ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲಿಲ್ಲ. ಬಿಜೆಪಿ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡಿಲ್ಲ. ಇದಕ್ಕೆಲ್ಲ ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರವೇ ಕಾರಣವಾಗಿರಬಹುದು. ಇನ್ನು ಮುಂದೆ ಅಧ್ಯಕ್ಷರು ಮತ್ತು ಪ್ರತಿಪಕ್ಷ ನಾಯಕರು ಆಗಬಹುದು ಎಂದು ಹೇಳಿದರು.
ಜೆಡಿಎಸ್ ಜೊತೆಗಿನ ಮೈತ್ರಿಯಿಂದ ಬಿಜೆಪಿಗೇನು ಲಾಭವಿಲ್ಲ. ಮೈತ್ರಿಯಾದರೆ ಹೆಚ್ಚು ಶಕ್ತಿ ಬರಬಹುದು ಎಂಬ ಉದ್ದೇಶದಿಂದ ಮೈತ್ರಿ ಮಾಡಿಕೊಳ್ಳುತ್ತಿರಬಹುದು. ದೇವೇಗೌಡರು ಇರುವವರಿಗೆ ಬಿಜೆಪಿ ಜೊತೆ ಹೋಗಲ್ಲ ಎಂದುಕೊಂಡಿದ್ದೆ. ಆದರೆ ಜಾತ್ಯತೀತ ಪಕ್ಷವಾದ ಪ್ರಾದೇಶಿಕ ಪಕ್ಷ ಜೆಡಿಎಸ್ ಕೋಮುವಾದಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ನನಗೆ ಆಶ್ಚರ್ಯ ತಂದಿದೆ ಎಂದರು.
