P. M ಸೂರ್ಯಘರ್' ಜಿಎಸ್‌ಟಿ ಇಳಿಕೆಯಿಂದ ಸೌರಶಕ್ತಿ ಕ್ಷೇತ್ರದಲ್ಲಿ ಮೆಗಾ ಕ್ರಾಂತಿ, ಮತ್ತಷ್ಟು ಜನಪ್ರಿಯವಾಗಲಿದೆ.

Waves of Karnataka


 ಸೌರ ವಿದ್ಯುತ್ ಉಪಕರಣಗಳ ಮೇಲಿನ ಜಿಎಸ್‌ಟಿಯನ್ನು ಶೇಕಡಾ 12 ರಿಂದ ಶೇಕಡಾ 5ಕ್ಕೆ ಇಳಿಸಲಾಗಿದ್ದು, ಇದರಿಂದಾಗಿ 3 ಕಿಲೋವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ವ್ಯವಸ್ಥೆಯ ದರವು 10,500 ರೂ.ವರೆಗೆ ಕಡಿಮೆಯಾಗಲಿದೆ. ಈ ಕ್ರಮವು 'P. M ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ'ಯನ್ನು ಉತ್ತೇಜಿಸಲಿದ್ದು, ರೈತರು, ಉದ್ಯಮಿಗಳು ಸೌರ ವಿದ್ಯುತ್‌ ಅಳವಡಿಸಿಕೊಳ್ಳಲು ಪ್ರೇರೇಪಿಸಲಿದೆ.

ರೈತರು, ಉದ್ಯಮಿಗಳು ಹಾಗೂ ಜನಸಾಮಾನ್ಯರು ಹೆಚ್ಚು ಹೆಚ್ಚು ಸೌರ ವಿದ್ಯುತ್ ಅಳವಡಿಸಿಕೊಳ್ಳಲು ಆಸಕ್ತಿ ತೋರುತ್ತಾರೆ ಎಂದು ಕೇಂದ್ರ ನವೀಕೃತ ಇಂಧನ ಸಚಿವಾಲಯದ ಪ್ರಕಟಣೆ ತಿಳಿಸಿದೆ.

ಒಂದು ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಯೋಜನೆಗೆ 3.5 ಕೋಟಿ ರೂ.ನಿಂದ 4 ಕೋಟಿ ರೂ. ಆಗಬಹುದು. ಜಿಎಸ್‌ಟಿ ಇಳಿಕೆಯಿಂದ ಸುಮಾರು 25 ಲಕ್ಷ ರೂ. ಉಳಿಸಲು ಸಾಧ್ಯ. ಹಾಗೆಯೇ, 500 ಮೆ.ವ್ಯಾ. ಸೋಲಾ‌ರ್ ಪಾರ್ಕ್‌ನ ಯೋಜನಾ ವೆಚ್ಚದಲ್ಲೂ 100 ಕೋಟಿ ರೂ. ಉಳಿಕೆಯಾಗುತ್ತದೆ. ತೆರಿಗೆ ಇಳಿಕೆಯಿಂದ ಸ್ಪರ್ಧಾತ್ಮಕತೆಗೆ ಹೆಚ್ಚು ವೇಗ ಸಿಗಲಿದೆ ಎಂದೂ ಸಚಿವಾಲಯ ಹೇಳಿದೆ.

ಮಾಲಿನ್ಯಕ್ಕೆ ಕಡಿವಾಣ

ಪ್ರತಿ ಗಿಗಾ ವ್ಯಾಟ್‌ ಸೌರಶಕ್ತಿಯು ವಾರ್ಷಿಕವಾಗಿ ಸುಮಾರು 1.3 ಮಿಲಿಯನ್ ಟನ್ ಕಾರ್ಬನ್ ಡೈಆಕ್ಸೆಡ್ ವಾತಾವರಣವನ್ನು ಸೇರುವುದನ್ನು ತಪ್ಪಿಸುತ್ತದೆ. ಜಿಎಸ್‌ಟಿ ಸುಧಾರಣೆಯಿಂದ 2030ರ ವೇಳೆಗೆ ವಾರ್ಷಿಕವಾಗಿ 50-70 ದಶಲಕ್ಷ ಟನ್ ಇಂಗಾಲದ ಹೊರಸೂಸುವಿಕೆಯನ್ನು ತಡೆಯಬಹುದು. ಪ್ಯಾರಿಸ್ ಒಪ್ಪಂದದ ಪ್ರಕಾರ 2030ರ ವೇಳೆಗೆ 500 ಮೆಗಾವ್ಯಾಟ್ ಪಳೆಯುಳಿಕೆಯೇತರ ಇಂಧನವನ್ನು ತಯಾರಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಸೌರ ಶಕ್ತಿ ಉತ್ಪಾದನೆಯ ಹೆಚ್ಚಳದಿಂದ ಅಭಿವೃದ್ಧಿಶೀಲ ದೇಶಗಳಲ್ಲಿ ಭಾರತದ ಬದ್ಧತೆಯನ್ನು ಜಗತ್ತಿಗೆ ತೋರಿಸಲು ಮತ್ತು ವಾಯು ಮಾಲಿನ್ಯ ತಡೆಗಟ್ಟಲು ಸಾಧ್ಯವಾಗಲಿದೆ.

ಡಿಸ್ಕಾಂಗೆ ಭಾರಿ ಉಳಿತಾಯ

ಜಿಎಸ್‌ಟಿ ಪರಿಷ್ಕರಣೆಯಿಂದ ಡಿಸ್ಕಾಂಗಳಿಗೆ ವಿದ್ಯುತ್ ಖರೀದಿ ವೆಚ್ಚ ಕಡಿಮೆಯಾಗುತ್ತದೆ. ಇದರಿಂದ ದೇಶವ್ಯಾಪಿ ಸುಮಾರು 2,000 ಕೋಟಿ ರೂ.ನಿಂದ 3,000 ಕೋಟಿ ರೂ.ವರೆಗೆ ವೆಚ್ಚದಲ್ಲಿ ಉಳಿತಾಯ ಆಗಹುದು. ಪಿಎಂ- ಕುಸುಮ್ ಯೋಜನೆ ಅಡಿಯಲ್ಲಿ ರೈತರು ಪಡೆದುಕೊಳ್ಳುತ್ತಿರುವ ಲಾಭ ಇನ್ನಷ್ಟು ಹೆಚ್ಚಲಿದೆ. ಈಗ 5 ಎಚ್‌ಪಿ ಸೋಲಾರ್ ಪಂಪ್ ಬೆಲೆ ಎರಡೂವರೆ ಲಕ್ಷ ರೂ. ಇದೆ. ಪರಿಷ್ಕೃತ ಜಿಎಸ್‌ಟಿ ಜಾರಿ ನಂತರ ಇದರ ಬೆಲೆಯಲ್ಲಿ 17,500 ರೂ. ಇಳಿಯಲಿದೆ.

ಗುರಿ ಮುಟ್ಟಲು ಬಲ

2030ರ ವೇಳೆಗೆ 100 ಗಿಗಾ ವ್ಯಾಟ್ ಸೌರ ವಿದ್ಯುತ್ ಉತ್ಪಾದಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.

ಜಿಎಸ್‌ಟಿ ಇಳಿಕೆಯು ಸರಕಾರದ ಗುರಿ ಮುಟ್ಟಲು ಬಲ ನೀಡುತ್ತದೆ. ಒಂದು ಗಿಗಾವ್ಯಾಟ್ ಸೌರ ವಿದ್ಯುತ್‌ ತಯಾರಿಕೆಯಲ್ಲಿ 5,000 ಉದ್ಯೋಗಗಳು ಸೃಷ್ಟಿಯಾಗುತ್ತವೆ. 100 ಗಿ.ವ್ಯಾ ಮಟ್ಟದಲ್ಲಿ 5 ಲಕ್ಷ ಉದ್ಯೋಗಗಳು ಸೃಷ್ಟಿಯಾಗಬಹುದು. ಇದು ಶುದ್ಧ ಇಂಧನ ಉದ್ಯಮದಲ್ಲಿ ದೊಡ್ಡ ಪಲ್ಲಟಗಳನ್ನುಂಟು ಮಾಡಲಿದೆ.

ಭಾರತ ನಿರ್ಮಿತ ನವೀಕರಿಸಬಹುದಾದ ಇಂಧನ ಉಪಕರಣಗಳ ಬೆಲೆ ಶೇ. 3-4ರಷ್ಟು ಕಡಿಮೆಯಾಗುತ್ತದೆ. ಇದರಿಂದ ಇವುಗಳ ಮಾರಾಟದಲ್ಲಿ ಹೆಚ್ಚು ಸ್ಪರ್ಧಾತ್ಮಕತೆ ಉಂಟಾಗುತ್ತದೆ. ಇದು ಆತ್ಮನಿರ್ಭರ ಭಾರತದ ಉಪಕ್ರಮಗಳಿಗೆ ಇನ್ನಷ್ಟು ಬಲ ನೀಡುತ್ತದೆ.