ವಾಷಿಂಗ್ಟನ್: ಭಾರತ ರಷ್ಯಾದಿಂದ ಕಚ್ಚಾತೈಲ ಆಮದು ಮಾಡಿಕೊಳ್ಳುವುದಕ್ಕೆ ಅಮೆರಿಕ ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ, ಭಾರತದಲ್ಲಿ ಮುಂದಿನ ಅಮೆರಿಕನ್ ರಾಯಭಾರಿಯಾಗಿ ನಿಯುಕ್ತಿಗೊಂಡಿರುವ ಸೆರ್ಗಿಯೊ ಗೋರ್ ಹೇಳಿಕೆ ನೀಡಿ, "ಅಮೆರಿಕದ ಕಚ್ಚಾತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಭಾರತ ತನ್ನ ಮಾರುಕಟ್ಟೆ ಮುಕ್ತಗೊಳಿಸಬೇಕು" ಎಂದು ಆಗ್ರಹಿಸಿದ್ದಾರೆ.
ಉಭಯ ದೇಶಗಳ ನಡುವೆ ವ್ಯಾಪಾರ ಸಂಘರ್ಷ ನಡೆಯುತ್ತಿದ್ದು, ಭಾರತದ ಆಮದಿನ ಮೇಲೆ ಅಮೆರಿಕ ಶೇಕಡ 50ರಷ್ಟು ಸುಂಕ ವಿಧಿಸಿರುವ ನಡುವೆಯೇ ಗೋರ್ ಈ ಹೇಳಿಕೆ ನೀಡಿದ್ದಾರೆ. ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುತ್ತಿರುವುದಕ್ಕೆ ಪ್ರತೀಕಾರವಾಗಿ ಶೇಕಡ 25ರಷ್ಟು ತೆರಿಗೆ ವಿಧಿಸಲಾಗಿದೆ. ಈ ವಿವಾದಗಳನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಉಭಯ ದೇಶಗಳು ಮುಂದೆ ಸಾಗಿವೆ ಎಂದೂ ಗೋರ್ ಹೇಳಿದ್ದಾರೆ.
ಈ ವ್ಯಾಪಾರ ಮಾತುಕತೆಗಳು ಮುಂದುವರಿಯಬೇಕು ಎನ್ನುವುದು ನಮ್ಮ ಬಯಕೆ. ಜತೆಗೆ ಅಮೆರಿಕದ ಕಚ್ಚಾತೈಲ, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಎಲ್ಎಲ್ಜಿಗೆ ಭಾರತ ಮಾರುಕಟ್ಟೆ ಮುಕ್ತವಾಗಬೇಕು ಎನ್ನುವುದು ನಮ್ಮ ಬೇಡಿಕೆ" ಎಂದು ಗೋರ್ ಹೇಳಿದ್ದಾರೆ.
ಈ ಮಾರುಕಟ್ಟೆಗಳಿಗೆ ವಿಸ್ತರಿಸಲು ನಮ್ಮ ಮುಂದೆ ಅಸಂಖ್ಯಾತ ಸಾಧ್ಯತೆಗಳಿವೆ ಹಾಗೂ ನಾವು ಈ ಉದ್ದೇಶ ಹೊಂದಿದ್ದೇವೆ" ಎಂದು ಸ್ಪಷ್ಟಪಡಿಸಿದ್ದಾರೆ. ಉಭಯ ದೇಶಗಳ ನಡುವಿನ ವ್ಯಾಪಾರ ಸಂಬಂಧ ಉಳಿಯಬೇಕಾದರೆ ಭಾರತ ರಷ್ಯಾದಿಂದ ತೈಲ ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಬೇಕು ಎಂಬ ಟ್ರಂಪ್ ಆಗ್ರಹವನ್ನು ಗೋರ್ ಪುನರುಚ್ಚರಿಸಿದರು.
